Dhananjay Instagram – ಇವರ ಹೆಸರು ಪ್ರತೀಕ್ ಶೆಟ್ಟಿ. ಕೋಟಿ ಸಿನಿಮಾದ ಎಡಿಟರ್. ಈಗಷ್ಟೇ ಕಾಲೇಜಿಂದ ಹೊರಗಡೆ ಬಂದಂತೆ ಕಾಣಿಸುವ, ಕ್ಯಾಮರಾ ಕಾಣಿಸಿದರೆ ಅಲ್ಲಿಗೆ ಬರುವುದನ್ನೇ ಎಡಿಟ್ ಮಾಡಿಬಿಡುವ ಸಂಕೋಚದ ವ್ಯಕ್ತಿ.
ಎಡಿಟರ್ ಹುಡುಕಾಟದಲ್ಲಿದ್ದಾಗ ಸಿಕ್ಕಿದವರು ಪ್ರತೀಕ್. ಕೋಟಿ ಕತೆ ಕೇಳಿದರು. ಕೆಲಸ ಮಾಡಲು ಒಪ್ಪಿಕೊಂಡರು. ಅದಾದ ಮೇಲೆ ಅವರಿಂದ ಒಂದು ಉದ್ದದ ಅಗ್ರಿಮೆಂಟ್ ಬಂತು. ಅದರಲ್ಲಿ ಸಿನಿಮಾ ಎಡಿಟ್ ಮಾಡಲು ಎಷ್ಟು ಗಂಟೆಗಳ ಕಾಲ ಸ್ಟುಡಿಯೋ ಬಳಸಿಕೊಳ್ಳಬಹುದು, ಎಷ್ಟು ಸಲ ಕರೆಕ್ಷನ್ ಹೇಳಬಹುದು, ಟ್ರೇಲರ್ ಕಟ್ ಅನ್ನು ಒಂದು ಸಲ ಮಾತ್ರ ಬದಲಾಯಿಸಬಹುದು ಎಂದೆಲ್ಲಾ ಇತ್ತು. ಇದನ್ನು ಓದಿ ಗಾಬರಿಯಾಯಿತು. ಎಡಿಟರ್ ರೊಚ್ಚಿಗೆದ್ದು ಮರ್ಡರ್ ಮಾಡಲು ಸ್ಕೆಚ್ ಹಾಕಿಕೊಳ್ಳುವಷ್ಟು ಸಲ ಎಡಿಟ್ ಬದಲಾವಣೆ ಕೇಳಿ ಅಭ್ಯಾಸವಾಗಿದ್ದ ನನಗೆ ಇವರ ಜೊತೆ ಕೆಲಸ ಮಾಡಲು ಸಾಧ್ಯವೇ ಇಲ್ಲ ಅಂತ ಅನುಮಾನ ಬಂತು. ಆದರೂ ಒಂದು ಫೋನ್ ಕಾಲ್ ಮಾಡಿದೆ.
ಆಮೇಲೆ ಏನಾಯಿತು ಗೊತ್ತಾ? ಸಿನಿಮಾವನ್ನು ಹತ್ತಾರು ಸಲ ಪ್ರತೀಕ್ ಎಡಿಟ್ ಮಾಡಿ ತೋರಿಸಿದ್ದಾರೆ. ಅಗ್ರೀಮೆಂಟಲ್ಲಿ ಇಲ್ಲದೇ ಇದ್ದ ಟೀಸರನ್ನು ಎಡಿಟ್ ಮಾಡಿ ಕೊಟ್ಟಿದ್ದಾರೆ. ಎಷ್ಟು ತಾಸು ಸ್ಟುಡಿಯೋ ಬಳಸಿದ್ದೇವೆ ಎನ್ನುವುದು ಇಬ್ಬರಿಗೂ ಮರೆತು ಹೋಗಿದೆ. ಅವರ ಅಪರ್ಟ್‌ಮೆಂಟಲ್ಲಿ ಹಗಲು ರಾತ್ರಿ ಕುಡಿದ ಕಾಫೀ, ಮಾಡಿದ ಊಟ ಅವರಿಗೆ ಕೊಟ್ಟ ತೊಂದರೆಗಳು ಯಾವುದನ್ನೂ ಅವರು ಅಗ್ರೀಮೆಂಟಿಗೆ ಸೇರಿಸಿಲ್ಲ. ಎಡಿಟ್ ಕೆಲಸ ಮಾತ್ರ ಅಲ್ಲ. ಬೇರೆ ಕೆಲಸಗಳಲ್ಲೂ ಅವರು ಜೊತೆಯಾಗಿದ್ದಾರೆ. ಒಂದೇ ಮಾತಲ್ಲಿ ಹೇಳಬೇಕೆಂದರೆ ಸಿನಿಮಾ ಹುಚ್ಚ. ಅದ್ಭುತ ಕೆಲಸಗಾರ.
ಕಾಂತಾರದ ಇಬ್ಬರು ಎಡಿಟರುಗಳಲ್ಲಿ ಇವರು ಒಬ್ಬರು. ಚಾರ್ಲಿ ಇವರ ಇನ್ನೊಂದು ಮುಖ್ಯ ಸಿನಿಮಾ. ಅಪ್ಪು ಜೊತೆಗೆ ಗಂಧದ ಗುಡಿಯಲ್ಲಿ ಡಿಓಪಿ. ವಾರಿಜಾ ಅವರ ಮ್ಯೂಸಿಕ್ ವಿಡಿಯೋಗೂ ಇವರದೇ ಕ್ಯಾಮರಾ. ಸಂಗೀತ, ಡಾನ್ಸ್, ಸೌಂಡ್ ಎಫೆಕ್ಟ್ಸ್, ವಿಷ್ಯುವಲ್ ಎಫೆಕ್ಟ್ಸ್ ಎಲ್ಲವೂ ಗೊತ್ತು. ಸಿನಿಮಾ ಅಪ್ಲೋಡ್ ಮಾಡುವಾಗ ಇರಬೇಕಾದ ಮುನ್ನೆಚ್ಚರಿಕೆಯಿಂದ ಹಿಡಿದು ಕಲರ್ ಕರೆಕ್ಷನ್ ತನಕ ಎಲ್ಲದಕ್ಕೂ ನನಗಂತೂ ಇವರೇ ಬೇಕು!
ಲ್ಯಾಗ್ ಅಂತ ಜನ ಹೇಳಿದರೂ ಪರವಾಗಿಲ್ಲ. ನಿಮ್ಮ ಸಜ್ಜನಿಕೆ ಮತ್ತು ಪ್ರೊಫೆಷನಲಿಸಂ ಎಡಿಟ್ ಆಗುವುದು ಬೇಡ. ಸಿನಿಮಾವನ್ನು ಇಷ್ಟೆಲ್ಲಾ ತಿಳಿದುಕೊಂಡಿರುವ ತಂತ್ರಜ್ಞ ಕನ್ನಡದಲ್ಲಿದ್ದಾರೆ ಅನ್ನುವುದೇ ನನಗಂತೂ ತುಂಬಾ ದೊಡ್ಡ ಹೆಮ್ಮೆ.
ಅಭಿನಂದನೆಗಳು ಪ್ರತೀಕ್!
#ಕೋಟಿ #KoteeMovie #KoteeOnJune14th | Posted on 06/Jun/2024 12:18:03